ಶಲ್ಲಕ - 
 	ಬರ್‍ಸೆರೇಸೀ ಕುಟುಂಬಕ್ಕೆ ಸೇರಿದ ಬಾಸ್ಟೆಲ್ಲಿಯಾ ಸೆರೇಟಾ ಎಂಬ ಶಾಸ್ತ್ರೀಯ ನಾಮವಿರುವ ಒಂದು ಮರ. ಶಲ್ಕಿ ಎಂಬ ಹೆಸರೂ ಉಂಟು. ದಕ್ಷಿಣ ಭಾರತ, ಬಿಹಾರ್, ರಾಜಸ್ತಾನ, ಒರಿಸ್ಸ, ಮಧ್ಯಭಾರತ, ಪೂರ್ವಭಾರತದ ರಾಜ್ಯಗಳು ಮತ್ತು ಗುಜರಾತ್‍ನಲ್ಲಿ ಸಾಮಾನ್ಯವಾಗಿ ಬೆಳೆಯುತ್ತದೆ.
ಈ ಪ್ರಭೇದದಲ್ಲಿ ಎರಡು ಬಗೆಗಳಿವೆ:

1.	 ಸೆರ್ರೇಟ—ಇದರ ಎಲೆಯ ಅಂಚು ಗರಗಸದ ಹಲ್ಲುಗಳಂತಿವೆ.  ಎಲೆಯ ಮೇಲೆ ಸೂಕ್ಷ್ಮವಾದ ಕೂದಲುಗಳಿರುವುವು.
2.	 ಗ್ಲಾಬ್ರ—ಇದರಲ್ಲಿ ಎಲೆಯ ಅಂಚು ಅಖಂಡವಾಗಿರುವುದು, ಎಲೆಯ ಮೇಲೆ ಕೂದಲಿರುವುದಿಲ್ಲ. 

	ಈ ಮರದಲ್ಲಿ ಒಲಿಯೋರೆಸಿನ್ ರಾಸಾಯನಿಕಗಳು ಉತ್ಪತ್ತಿಯಾಗುತ್ತವೆ. ಈ ರಸಕ್ಕೆ ಓಲಿಬನಮ್ ಅಥವಾ ಗುಗ್ಗಲ್ ಎಂದು ಹೆಸರು. ಆಗ ತಾನೇ ಸ್ರವಿಸಲ್ಪಟ್ಟ ದ್ರವ ಕಂದು ಬಣ್ಣದ್ದಾಗಿರುತ್ತದೆ. ಒಣಗಿದ ಅನಂತರ ಗಟ್ಟಿಯಾಗಿ ಬಂಗಾರದ ಬಣ್ಣಕ್ಕೆ ತಿರುಗುತ್ತದೆ. ಇದನ್ನು ಧೂಪವಾಗಿ ಬಳಸಬಹುದು. ಓಲಿಬನಮ್‍ನ್ನು ಉರಿಸಿದರೆ ಸುವಾಸನೆ ಹೊರಸೂಸುತ್ತದೆ. ಹೊರತೊಗಟೆಯನ್ನು ಮೊನಚಾದ ಕತ್ತಿಯಿಂದ ಕೆರೆಯುವುದರಿಂದ ಓಲಿಬನಮ್‍ನ್ನು ಪಡೆಯಬಹುದು.
ಓಲಿಬನಮ್‍ನಲ್ಲಿ ತೇವಾಂಶ ಸೇ. 10, ಚಂಚಲ ಎಣ್ಣೆಯ ಅಂಶ ಸೇ. 8-9, ರೋಸಿನ್ ಸೇ. 5.5 ರಿಂದ 5.7, ಅಂಟು ಸೇ. 20-23, ಧೂಪಗುಣವುಳ್ಳಂಥ ವಸ್ತು ಸೇ. 4-5 ಮುಖ್ಯ ಘಟಕಗಳಾಗಿವೆ.

	ಉಪಯೋಗ: ಇದನ್ನು ಮುಲಾಮುಗಳಲ್ಲಿ ಬಳಸುತ್ತಾರೆ. ಭಾರತೀಯ ವೈದ್ಯಕೀಯ ವಿಜ್ಞಾನದಲ್ಲಿ ಕೀಲು ನೋವು, ನರಗಳ ರೋಗವನ್ನು ವಾಸಿಮಾಡಲು ಉಪಯೋಗಿಸುತ್ತಾರೆ. ರೋಸಿನ್ ಅಂಶವನ್ನು ವಾರ್ನಿಷ್ ಗಳಲ್ಲಿ ಬಳಸುತ್ತಾರೆ. ಮರದಿಂದ ಕುರ್ಚಿ, ಮೇಜು ಮತ್ತು ಇತರೆ ಸಾಮಾನುಗಳನ್ನು ತಯಾರಿಸಬಹುದಾಗಿದೆ.			
		(ಟಿ.ಎಮ್.ಆರ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ